ಪೆಲ್ಟ್ಯಾ, ಪಿಯರಿ ಜೋಸೆಫ್	1788-1842. ಫ್ರೆಂಚ್ ರಸಾಯನ ವಿಜ್ಞಾನಿ. ಜನನ: ಪ್ಯಾರಿಸ್ 22 ಮಾರ್ಚ್ 1788. ಮರಣ: ಪ್ಯಾರಿಸ್. 19 ಜುಲೈ 1842. ಪ್ರಾಧ್ಯಾಪಕನಾಗಿದ್ದ ಪೆಲ್ಟ್ಯಾ ಅಂತಿಮವಾಗಿ ಪ್ಯಾರಿಸ್ಸಿನ ಫಾರ್ಮಸಿ ಶಾಲೆಯ ಉಪನಿರ್ದೇಶಕನಾದ. ಅವನು ಶೋಧಿಸಿದಷ್ಟು ವೈದ್ಯಕೀಯ ಮಹತ್ತ್ವವುಳ್ಳ ನೈಸರ್ಗಿಕ ಪದಾರ್ಥಗಳನ್ನು ಬೇರೆ ಯಾರೂ ಶೋಧಿಸಿರಲಾರರು. 1820ರಲ್ಲಿ ಜೋಸೆಫ್ ಬಿನಾಮೆ ಕ್ಯಾವೆಂಟೌನ ಸಹಚರ್ಯೆಯಲ್ಲಿ ಬ್ರೂಸೀನ್, ಸಿಂಕೊನೈನ್, ಕ್ವಿನೈನ್, ಸ್ಟ್ರೀಕ್‍ನೈನ್ ಮೊದಲಾದ ಆಲ್ಕಲಾಯ್ಡುಗಳನ್ನು ಪ್ರತ್ಯೇಕಿಸಿದ. ಇವು ಪ್ರಾಣಿದೇಹದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ. ಇವುಗಳ ಪೈಕಿ ಕೆಲವನ್ನು ಮೆಗೆಂಡಿ ವೈದ್ಯಕೀಯದಲ್ಲಿ ಬಳಕೆಗೆ ತಂದ. ಉದಾಹರಣೆಗೆ ಕ್ವಿನೈನ್ ಮಲೇರಿಯ ರೋಗಕ್ಕೆ ಸಿದ್ಧೌಷಧ. ಪರಿಣಾಮವಾಗಿ ರೋಗ ಚಿಕಿತ್ಸೆಗೆ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಕಷಾಯ ಆಸವ ಮೊದಲಾದವನ್ನು ನೆಚ್ಚಿಕೊಂಡಿದ್ದ ವೈದ್ಯರು ಅಂಥ ಪದಾರ್ಥಗಳಿಂದಲೇ ಪಡೆಯಬಹುದಾದ ನಿರ್ದಿಷ್ಟ ರಾಸಾಯನಿಕಗಳನ್ನು ಬಳಸುವಂತಾಯಿತು. ತರುವಾಯ ಪ್ರಯೋಗ ಶಾಲೆಯಲ್ಲಿ ಅವನ್ನು ಸಂಶ್ಲೇಷಿಸಿ ಉಪಯೋಗಿಸಲು ಪ್ರಾರಂಭಿಸಿದರು. ಇದಕ್ಕೆ ಕ್ವಿನೈನ್ ಉತ್ತಮ ನಿದರ್ಶನ. ಮೊದಲು ಇದನ್ನು ಪೆಲ್ಟ್ಯಾ ಸಿಂಕೋನ ಚಕ್ಕೆಯಿಂದ ತಯಾರಿಸಿದ್ದ. ಮುಂದೆ 1944ರಲ್ಲಿ ವುಡ್‍ವರ್ಡ್ ಮತ್ತು ಡೋರಿಂಗ್ ಇವರು ಇದನ್ನು ಪ್ರಯೋಗ ಶಾಲೆಯಲ್ಲಿ ಸಂಶ್ಲೇಷಿಸಿದುದನ್ನು ನೆನೆಯಬಹುದು.
ಕ್ಲೋರೋಫಿಲ್ಲಿನ ಆವಿಷ್ಕಾರ ಪೆಲ್ಟ್ಯಾ ಮತ್ತು ಕ್ಯಾವೆಂಟೌ ಇವರ ಮಹತ್ಸಾಧನೆ. ಇದು ಸಸ್ಯ ಸಾಮ್ರಾಜ್ಯದ ಪತ್ರಹರಿತ್ತು. ಸಸ್ಯಗಳ ಹಸಿರು ಬಣ್ಣಕ್ಕೆ ಕಾರಣವಾದ ಪದಾರ್ಥ. ಇದರ ನೆರವಿಲ್ಲದೆ ದ್ಯುತಿಸಂಶ್ಲೇಷಣೆ ನಡೆಯುವುದಿಲ್ಲ. ಗ್ರೀಕ್ ಭಾಷೆಯಲ್ಲಿ ಕ್ಲೋರೋಫಿಲ್ ಅಂದರೆ ಹಸಿರೆಲೆ ಎಂದರ್ಥ. ಈ ಹೆಸರಿಟ್ಟವರೂ ಅವರೇ. ಕಾರ್ಬನ್ ಡೈಆಕ್ಸೈಡ್ ಮತ್ತು ನೀರು ಎರಡೂ ಬಣ್ಣವಿಲ್ಲದ ಪದಾರ್ಥಗಳು. ಅಂದರೆ ಅವುಗಳಿಗೆ ಗೋಚರ ಬೆಳಕನ್ನು ಹೀರುವ ಸಾಮಥ್ರ್ಯವಿಲ್ಲ. ಕ್ಲೋರೋಫಿಲ್ಲಿನ ಬಣ್ಣ ಹಸಿರು. ಅದು ಗೋಚರ ರೋಹಿತದ ಉಳಿದ ಆರು ಬಣ್ಣಗಳನ್ನು ಹೀರಿಕೊಂಡು ಹಸಿರು ಬಣ್ಣವನ್ನು ಮಾತ್ರ ಹೊರಚೆಲ್ಲುವುದೆಂದು ಇದರ ಅರ್ಥ. ಅದು ತಾನು ಹೀರಿಕೊಂಡ ದ್ಯುತಿಶಕ್ತಿಯನ್ನು ಕಾರ್ಬನ್ ಡೈ ಆಕ್ಸೈಡಿಗೂ ನೀರಿಗೂ ನೀಡುವುದರಿಂದ ಅವು ಉತ್ತೇಜಿತವಾಗಿ ಹಲವು ಸಂಕೀರ್ಣ ಹಂತಗಳ ಮೂಲಕ ಅಂತಿಮವಾಗಿ ಪಿಷ್ಟವನ್ನು ರೂಪಿಸುತ್ತವೆ : 
ಕ್ಲೋರೋಫಿಲ್ + h( ( ಕ್ಲೋರೊಫಿಲ್*
(
ಬಿಡುಗಡೆಯಾದ ಆಕ್ಸಿಜನ್ ಪ್ರಾಣಿಗಳ ಉಸಿರಾಟಕ್ಕೆ ವಿನಿಯೋಗವಾಗುವುದು. ಹೀಗೆ ಕ್ಲೋರೊಫಿಲ್ ಸಸ್ಯ ಮತ್ತು ಪ್ರಾಣಿ ಸಾಮ್ರಾಜ್ಯಗಳ ಚಟುವಟಿಕೆಗಳನ್ನು ಸರ್ವದಾ ನಿರ್ದೇಶಿಸುತ್ತದೆ. ಇದರ ಆವಿಷ್ಕಾರದಿಂದ ಪೆಲ್ಟ್ಯಾನ ಹೆಸರು ರಸಾಯನವಿಜ್ಞಾನದ ಇತಿಹಾಸದಲ್ಲಿ ಚಿರಸ್ಥಾಯಿಯಾಗಿದೆ.     							      (ಎಸ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ